ಶಿಲೀಂಧ್ರಗಳು
-	ಸಾವಯವ ಪದಾರ್ಥಗಳನ್ನು ಆಧರಿಸಿ ಬೆಳೆಯುವ ಪತ್ರಹರಿತ್ತುರಹಿತ ಪರಾವಲಂಬಿ ಜೀವಿಗಳ ಒಂದು ಗುಂಪು (ಫಂಗೈ). ತೆಂಗಿನಕಾಯಿ ಚೂರು ಅಥವಾ ಬ್ರೆಡ್ ತುಣುಕನ್ನು ಮುಚ್ಚದೆ ಇಟ್ಟಿದ್ದರೆ ಕ್ರಮೇಣ ಅದರಮೇಲೆ ಗೋಜುಗೋಜಲಾದ ಒಂದು ತೆಳುಪದರ  ಮೈದಳೆಯುತ್ತದೆ. ಹತ್ತಿಯ ಎಳೆಗಳೋ ಎಂಬಂತೆ. ಇದು ಬೂಷ್ಟು- ಒಂದು ಬಗೆಯ ಶಿಲೀಂಧ್ರ. ನಾಯಿಕೊಡೆಗಳು, ಅಣಬೆಗಳು ಮತ್ತು ಹಸುರೆಲೆಗಳ ಮೇಲೆ ಏಳುವ ಕಂದು ಮಚ್ಚೆಗಳು ಎಲ್ಲವೂ ಶಿಲೀಂಧ್ರಗಳೇ (ನೋಡಿ- ಸೂಕ್ಷ್ಮಜೀವಿವಿe್ಞÁನ) ಹೆಪ್ಪುಹಾಕಿದ ಹಾಲು ಮೊಸರಾಗುವುದು, ಕಡೆದ ಮಜ್ಜಿಗೆ ಹುಳಿಯಾಗುವುದು ಮುಂತಾದವು ಶಿಲೀಂಧ್ರಕ್ರಿಯೆಗಳು. ಕೆಲವು ಬಗೆಗಳು ಕೃಷಿಬೆಳೆಗಳಲ್ಲಿಯೂ ಕೆಲವು ಮನುಷ್ಯರಲ್ಲಿಯೂ ರೋಗ ಉಂಟು ಮಾಡುತ್ತವೆ. ಆಹಾರ ಕೆಡುವುದು ಅಥವಾ ಹಳಸುವುದು ಇವುಗಳ ಕಾರಣವಾಗಿಯೇ. ಉಪಯುಕ್ತ ಪ್ರಭೇದಗಳೂ ಇವೆ. ವಾಸ್ತವವಾಗಿ ಶಿಲೀಂಧ್ರಗಳಲ್ಲಿ ಸು. 1,20,000 ಪ್ರಭೇದಗಳಿವೆ.

	ವರ್ಗೀಕರಣ ಮತ್ತು ಸಾಮಾನ್ಯ ಲಕ್ಷಣಗಳು: ಶಿಲೀಂಧ್ರಗಳ ಸಮಗ್ರ ಗುಂಪಿಗೆ ಮೈಕೊಟಿನಾ ಎಂದು ಹೆಸರು. ಇದರಲ್ಲಿ ನಾಲ್ಕು ಉಪವಿಭಾಗ ಗಳಿವೆ: 

1. ಜೈಗೊಮೈಕೊಟಿನಾ: ಬಟಾಟೆಯನ್ನು ಪೀಡಿಸುವ ಲೇಟ್‍ಬ್ಲೈಟ್, ಬ್ರೆಡ್‍ಮೋಲ್ಡ್ ಮುಂತಾದವು. 
2. ಆಸ್ಕೊಮೈಕೊಟಿನಾ: ಯೀಸ್ಟ್, ಆಸ್ಪರ್‍ಜಿಲ್ಲಸ್, ಮಾರ್ಚೆಲ್ಲ ಮುಂತಾದವು.
3. ಬೆಸಿಡಿಯೊಮೈಕೊಟಿನಾ: ನಾಯಿಕೊಡೆ, ಅಣಬೆ ಇತ್ಯಾದಿ.
4. ಡ್ಯುಟಿರೊಮೈಕೊಟಿನಾ: ಪೆನಿಸಿಲಿಯಮ್, ಪ್ಯುಜೇರಿಯಮ್ ಇತ್ಯಾದಿ. ಈ ಉಪವಿಭಾಗದಲ್ಲಿ ಲಿಂಗರೀತಿಯ ಪ್ರಜನನ ಪತ್ತೆಯಾಗಿಲ್ಲ. 

	ಶಿಲೀಂಧ್ರಗಳಲ್ಲಿ ಬೇರು, ಎಲೆ, ಕಾಂಡ ಎಂಬ ಪ್ರತ್ಯೇಕ ಭಾಗಗಳಿಲ್ಲ. ಎಂದೇ ಇವುಗಳಿಗೆ ತ್ಯಾಲ್ಲಾಯಿಡಲ್ ಸಸ್ಯಗಳೆಂದು ಹೆಸರು. ಇವುಗಳಲ್ಲಿ ದಾರದ ಎಳೆಗಳಂಥ ಮೈಸೀಲಿಯಮ್‍ಗಳಿವೆ. ಕೋಶಗಳಲ್ಲಿ ಪತ್ರಹರಿತ್ತು ಇಲ್ಲ. ಶಿಲೀಂಧ್ರಗಳು ನಿರ್ಲಿಂಗರೀತಿಯ ವಂಶಾಭಿವೃದ್ಧಿ ಬೀಜಕಗಳ (ಸ್ಪೋರ್ಸ್) ಮೂಲಕ ಪ್ರಸಾರಗೊಳ್ಳುತ್ತವೆ. ಇವು ಸರ್ವಭಕ್ಷಿಗಳು- ಎದುರಾಗುವ ಎಲ್ಲ ಆಹಾರಪದಾರ್ಥಗಳೂ ಇವುಗಳಿಗೆ ಆಹಾರಗಳೇ. ಇಂಥವಕ್ಕೆ ಸ್ಯಾಫ್ರೊಫೈಟ್‍ಗಳೆಂದು ಹೆಸರು. ಇನ್ನೂ ಕೆಲವು ಶಿಲೀಂಧ್ರಗಳು ಪರಾವಲಂಬಿ ಜೀವಿಗಳು. ಇವುಗಳ ಕೋಶಭಿತ್ತಿ ಕೈಟಿನ್ ಎಂಬ ಪದಾರ್ಥದಿಂದಾಗಿದೆ. 

	ಮುಖ್ಯ ಪ್ರಯೋಜನಗಳು: ಅಣಬೆಯಂಥ ಕೆಲವು ಶಿಲೀಂಧ್ರಗಳನ್ನು ಆಹಾರವಾಗಿ ಬಳಸುವುದುಂಟು. ಆಹಾರಕ್ಕೆ ಮೃದುತ್ವ ಮತ್ತು ಸುವಾಸನೆ ಪೂಸಲು ಇವುಗಳ ಉಪಯೋಗವಿದೆ. ಮನುಷ್ಯರಿಗೆ ತಾಗುವ ಫುಪ್ಫುಸಗಳ ಕೆಲವು ರೋಗಗಳ ನಿಯಂತ್ರಣಕ್ಕೆ ಶಿಲೀಂಧ್ರ-ಉತ್ಪನ್ನವಾದ ಆಸ್ಪರ್‍ಜಿಲ್ಲಸ್ ಫ್ಯೂಮಿಗೇಟಸನ್ನು ಪ್ರಯೋಗಿಸುತ್ತಾರೆ. ಯೀಸ್ಟ್‍ಕೋಶಗಳಿಂದ ಹೀಮೊಗ್ಲಾಬಿನ್ನನ್ನು ತಯಾರಿಸುವರು. ರೊಚ್ಚುನೀರಿನ ಶುದ್ಧೀಕರಣ ದಲ್ಲಿ ಕೆಲವು ಶಿಲೀಂಧ್ರಗಳ ಉಪಯೋಗವಿದೆ. ಸೇ. 90ರಷ್ಟು ಮರಗಿಡಗಳಲ್ಲಿ ಶಿಲೀಂಧ್ರಗಳು ಬೇರುಗಳ ಸುತ್ತಮುತ್ತ ಮತ್ತು ಅವುಗಳ ಒಳಹೊಕ್ಕು ಕೂಡ ಬೆಳೆಯುತ್ತವೆ. ಇವುಗಳಿಗೆ ಮೈಕೊರೈಜ ಎಂದು ಹೆಸರು (ಮೈಕಾಸ್ ಎಂದರೆ ಶಿಲೀಂಧ್ರ, ರೈಜ ಎಂದರೆ ಬೇರು). ಇಂಥ ಸಸ್ಯಗಳನ್ನು ಬಂಜರು ಮತ್ತು ಗಾರು ನೆಲಗಳಲ್ಲಿ ಬೆಳೆಸಿದ್ದಾದರೆ ಕ್ರಮೇಣ ಆ ನೆಲಗಳು ಸಸ್ಯ ಸಂಪನ್ನವಾಗುವುದು ಸಾಧ್ಯವಿದೆ. ಇನ್ನು ಪೆನ್ಸಿಲಿಯಮ್ ಪ್ರಭೇದಗಳಿಂದ ಪೆನ್ಸಿಲಿನ್‍ನಂಥ ಪ್ರತಿಜೈವಿಕಗಳ ತಯಾರಿಕೆಗೆ ಶಿಲೀಂಧ್ರಗಳೇ ಮೂಲವಸ್ತುಗಳು. ಲಸಿಕೆ ತಯಾರಿಕೆಯಲ್ಲಿ ಯೀಸ್ಟ್‍ಕೋಶಗಳ ಉಪಯೋಗವಿದೆ.
	(ಟಿ.ಎಮ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ